ಶಿವರಾಮ ಕಾರಂತ, ಕೆ
	1902-97. ಕನ್ನಡದ ಪ್ರಸಿದ್ಧ ಲೇಖಕರು, ಜ್ಞಾನಪೀಠಪ್ರಶಸ್ತಿ ಪುರಸ್ಕøತರು. ಸಾಹಿತ್ಯದ ಎಲ್ಲ ಪ್ರಕಾರಗಳಲ್ಲೂ ಇವರ ಬರೆವಣಿಗೆ ಇರುವುದು ಕಾಣಿಸುತ್ತದೆ. ಮಕ್ಕಳ ಪಠ್ಯಪುಸ್ತಕದಿಂದ ತೊಡಗಿ ಪ್ರೌಢ ವಿಚಾರಸಾಹಿತ್ಯದ ತನಕ, ಸಾಮಾನ್ಯ ಲೇಖನಗಳಿಂದ ತೊಡಗಿ ವಿಜ್ಞಾನ ವಿಶ್ವಕೋಶದ ತನಕ ಇವರ ಬರೆಹಗಳಿವೆ. ಕಥೆ ಕಾದಂಬರಿಗಳಲ್ಲದೆ ವ್ಯಕ್ತಿಚಿತ್ರಣ, ವ್ಯಂಗ್ಯಚಿತ್ರ, ನಾಟಕ, ಗೀತನಾಟಕ, ಪ್ರಬಂಧ, ಕಲಾಸಾಹಿತ್ಯ, ಯಕ್ಷಗಾನ, ರಾಜಕೀಯ ಮೊದಲಾದ ಹಲವಾರು ಮುಖಗಳಲ್ಲಿ ಇವರ ಬರೆವಣಿಗೆ ವಿಪುಲವಾಗಿದೆ, ವೈವಿಧ್ಯವಾಗಿದೆ. 

	ಇವರು ದಕ್ಷಿಣ ಕನ್ನಡ ಜಿಲ್ಲೆಯ ಕೋಟ ಎಂಬ ಹಳ್ಳಿಯಲ್ಲಿ 1902 ಅಕ್ಟೋಬರ್ 10ರಂದು ಜನಿಸಿದರು. ಆರಂಭದ ವಿದ್ಯಾಭ್ಯಾಸವನ್ನು ಕೋಟದ ಎಲಿಮೆಂಟರಿ ಶಾಲೆಯಲ್ಲೂ ಕುಂದಾಪುರದಲ್ಲಿ ಪ್ರೌಢಶಾಲಾ ವ್ಯಾಸಂಗವನ್ನೂ ನಡೆಸಿದ ಇವರು, ಕಾಲೇಜು ಶಿಕ್ಷಣಕ್ಕಾಗಿ ಮಂಗಳೂರು ಸರ್ಕಾರಿ ಕಾಲೇಜನ್ನು ಸೇರಿದರಾದರೂ(1922), ಕಟ್ಟುನಿಟ್ಟಿನ ಗಾಂಧೀವಾದಿಗಳಾಗಿ ದೇಶಸೇವೆಗೆ ಇಳಿದರು. ಕೈನೂಲು ತೆಗೆದು, ಖಾದೀಧಾರಿಗಳಾಗಿ, ದಲಿತೋದ್ಧಾರ, ಮದ್ಯಪಾನನಿರೋಧ, ನೆರೆಪರಿಹಾರ ಮೊದಲಾದ ಸೇವಾಕಾರ್ಯಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಆಗಿನ ದಕ್ಷಿಣ ಕನ್ನಡದ ಹಳ್ಳಿಹಳ್ಳಿಗಳನ್ನು ಸಂಚರಿಸಿದರು. ಗಡ್ಡ ಬೆಳೆಯಿಸಿ, ಬ್ರಹ್ಮಚರ್ಯದೀಕ್ಷೆಯನ್ನು ಕೈಗೊಂಡು ದೇಶದ ನಾನಾ ಭಾಗಗಳನ್ನು ಸುತ್ತಿದರೂ ತಮಗೆ ಸರಿಕಂಡುದುದನ್ನು ಯಾರ ದಯೆ ದಾಕ್ಷಿಣ್ಯಗಳಿಗೂ ಒಳಗಾಗದೆ ಮಾಡುವ ಪ್ರವೃತ್ತಿಯ ಇವರು ಗಾಂಧೀಮಾರ್ಗ ತಮಗೆ ಸರಿಹೊಂದದಾಗ ಅದನ್ನು ತೊರೆದರು. ಸಮಾಜ ಜೀವನದಲ್ಲಿ ಬ್ರಹ್ಮಚರ್ಯದ ಕಟ್ಟು ಆವಶ್ಯವೂ ಅನುಕೂಲವೂ ಅಲ್ಲವೆಂದು ಕಂಡಾಗ ವಿವಾಹವಾದರು (1936). ಪುತ್ತೂರಿನಲ್ಲಿ ನೆಲಸಿ (1930) ತಮ್ಮ ವಿವಿಧ ಪ್ರಯೋಗಗಳಿಗೆ ಅಲ್ಲಿನ ಸುತ್ತುಮುತ್ತಲ ಹಳ್ಳಿಗಳನ್ನು ಕಾರ್ಯ ಕ್ಷೇತ್ರಗಳನ್ನಾಗಿ ಆರಿಸಿಕೊಂಡರು. ಇವರು ಪುತ್ತೂರಿನಲ್ಲಿ ಬಾಲವನವನ್ನು ಕಟ್ಟಿ ನಡೆಸಿದ ಚಟುವಟಿಕೆಗಳಲ್ಲಿ ಮಕ್ಕಳ ಕೂಟ, ಶಾಂತಿಶಿಬಿರ, ನಾಡಹಬ್ಬ, ಶಿಕ್ಷಕರ ಸಮ್ಮೇಳನಗಳು ಮುಖ್ಯವಾದವುಗಳು. ಇವರು ಮಕ್ಕಳಿಗಾಗಿ ಬರೆದ ನಾಟಕ, ಗೀತನಾಟಕ, ನವೀನ ನಾಟಕಗಳು ಈ ಅವಧಿಯಲ್ಲೇ ರಚಿತವಾದವು. 

	ಇವರಿಗೆ ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಒಳ್ಳೆಯ ಪ್ರಭುತ್ವವಿತ್ತು. 1924ರಿಂದಲೇ ತಮ್ಮ ಬರೆವಣಿಗೆಯನ್ನು ಆರಂಭಿಸಿದ ಕಾರಂತರು ಪ್ರಕಟಿಸಿದ ಮೊದಲ ಪುಸ್ತಕ ರಾಷ್ಟ್ರಗೀತ ಸುಧಾಕರ ಎಂಬುದು ಒಂದು ಕವನಸಂಕಲನ. ಸೀಳ್ಗವನಗಳು(1992) ಅವರ ಕೊನೆಯ ಕವನ ಸಂಕಲನ. ವಿಚಿತ್ರಕೂಟ ಇವರು ಬರೆದ ಮೊದಲ ಕಾದಂಬರಿ. ಅನಂತರ ಇವರು ಪ್ರಕಟಿಸಿದ ನಿರ್ಭಾಗ್ಯ ಜನ್ಮ, ಸೂಳೆಯ ಸಂಸಾರ ಕಾದಂಬರಿಗಳಲ್ಲಿ ಸಮಾಜದ ಬಡತನ, ಗೋಳು, ದಾರುಣ ಜೀವನದ ಚಿತ್ರಣವಿದೆ. ಚೋಮನ ದುಡಿ ಕಾದಂಬರಿಯಲ್ಲಿ ದಕ್ಷಿಣ ಕನ್ನಡದ ಅಸ್ಪøಶ್ಯ ವರ್ಗದ ಜೀವನ ಚಿತ್ರಣವಿದೆ. ಮುಗಿದ ಯುದ್ಧ, ಬೆಟ್ಟದ ಜೀವ, ಕುಡಿಯರ ಕೂಸು ಕಾದಂಬರಿಗಳು ನಾಡಿನ ವಿವಿಧ ವರ್ಗಗಳ ಜನಜೀವನದ ಜೀವಂತ ಚಿತ್ರಣ. ಸ್ವಪ್ನದ ಹೊಳೆ, ಮೊಗ ಪಡೆದ ಮನ, ಇಳೆ ಎಂಬ ಕಾದಂಬರಿಗಳಲ್ಲಿ ಕಲಾವಿದ ಮನೋಧರ್ಮ, ಕಲಾಪ್ರವೃತ್ತಿಯ ಬೆಳೆವಣಿಗೆ ಭಾವಾಂದೋಲನಗಳು ರೂಪುಗೊಂಡಿವೆ. ಒಂಟಿದನಿ, ಅಳಿದ ಮೇಲೆ ಎಂಬವು ವ್ಯಕ್ತಿಚಿತ್ರಣ ಕಾದಂಬರಿಗಳು. ಔದಾರ್ಯದ ಉರುಳಲ್ಲಿ, ಗೊಂಡಾರಣ್ಯ, ಮೂಜನ್ಮ ಕಾದಂಬರಿಗಳು ರಾಜಕೀಯ ರಂಗದ ವಿವಿಧ ಮುಖಗಳನ್ನು ಚಿತ್ರಿಸುತ್ತವೆ. ಸಮಾಜದಲ್ಲಿನ ಧಾರ್ಮಿಕ ಪ್ರವೃತ್ತಿಯ ತೆರೆಯ ಹಿಂದೆ ನಡೆಯುತ್ತಿರುವ ವಸ್ತುಸ್ಥಿತಿಗೆ ಸಂನ್ಯಾಸಿಯ ಬದುಕು, ಕೇವಲ ಮನುಷ್ಯರು ಕಾದಂಬರಿಗಳು ಕನ್ನಡಿ ಹಿಡಿಯುತ್ತವೆ. ಸರಸಮ್ಮನ ಸಮಾಧಿ, ಮೈಮನಗಳ ಸುಳಿಯಲ್ಲಿ ಕಾದಂಬರಿಗಳು ಲೈಂಗಿಕ ಸಮಸ್ಯೆಯ ಹಲವಾರು ಮುಖಗಳನ್ನು ವೈಜ್ಞಾನಿಕವಾಗಿ ವಿವೇಚಿಸುತ್ತವೆ. ಮೂರು ತಲೆಮಾರುಗಳ ಗ್ರಾಮೀಣ ಚಿತ್ರಣವಿರುವ ಇವರ ಮರಳಿ ಮಣ್ಣಿಗೆ ಕನ್ನಡದ ಪ್ರಸಿದ್ಧ ಕಾದಂಬರಿಗಳಲ್ಲೊಂದು. ಈ ಕಾದಂಬರಿ ಇಂಗ್ಲಿಷ್, ಹಿಂದಿ, ತಮಿಳು ಭಾಷೆಗಳಿಗೆ ಅನುವಾದವಾಗಿದೆ. ನಾಡಿನ ಧಾರ್ಮಿಕ ಕಲ್ಪನೆಗಳ ನಾಲ್ಕೈದು ಸಾವಿರ ವರ್ಷಗಳ ಇತಿಹಾಸ ಹೇಳಲು ಹೊಸ ತಂತ್ರ ಒಂದನ್ನು ಬಳಸಿ ಬರೆದ ಕಾದಂಬರಿ ಮೂಕಜ್ಜಿಯ ಕನಸುಗಳು. 1979ರಲ್ಲಿ ಇದರ ಸಂಕ್ಷಿಪ್ತ ಇಂಗ್ಲಿಷ್ ಆವೃತ್ತಿಯೂ ಪ್ರಕಟವಾಗಿದೆ. ಅಂಟಿದ ಅಪರಂಜಿ(1986) ಇವರ ಕೊನೆಯ ಕಾದಂಬರಿ. 

	ನಾಟಕ ಕ್ಷೇತ್ರದಲ್ಲೂ ಇವರು ಸಾಕಷ್ಟು ಪ್ರಯೋಗ ನಡೆಸಿದ್ದಾರೆ. ವೃತ್ತಿ ನಾಟಕ ಕಂಪನಿಗಳಲ್ಲಿ ನಾಟಕಕಾರರಾಗಿಯೂ ತಾಲೀಮು ಮಾಸ್ತರರಾಗಿಯೂ ಅನುಭವಗಳಿಸಿ ಇವರು ಬರೆದ ಗರ್ಭಗುಡಿ, ಬಿತ್ತಿದ ಬೆಳೆ, ಮಂಗಳಾರತಿ ಮೊದಲಾದುವು ಸಾಮಾಜಿಕ ನಾಟಕಗಳು. ಗೀತನಾಟಕಗಳ ಮೊದಲ ಪ್ರಯೋಗ ನಡೆದುದು ಇವರಿಂದ. ಪೌರಾಣಿಕ, ಚಾರಿತ್ರಿಕ ಮತ್ತು ಜನಪದ ಕಥೆಗಳನ್ನು ಇವರು ಗೀತನಾಟಕಗಳ ವಸ್ತುವಾಗಿ ಆರಿಸಿಕೊಂಡಿದ್ದಾರೆ. ಈ ಬಗೆಯ ನಾಟಕಗಳ ಹಿನ್ನೆಲೆಯಲ್ಲಿ ಗೀತವನ್ನಿರಿಸಿ ಮೂಕನಾಟಕ ವನ್ನಾಗಿಯೂ ಛಾಯಾನಾಟಕವನ್ನಾಗಿಯೂ ಪ್ರಯೋಗಿಸಿದ್ದಾರೆ. ಮುಕ್ತದ್ವಾರ, ಲವಕುಶ, ಸತ್ಯವಾನ ಸಾವಿತ್ರಿ, ಕಿಸಾ ಗೋತಮಿ, ಬುದ್ಧೋದಯ, ಯಾರೋ ಅಂದರು, ಸೋಮಿಯ ಸೌಭಾಗ್ಯ ಇವು ಇವರ ಪ್ರಸಿದ್ಧ ಗೀತನಾಟಕಗಳು. ನಿಮ್ಮ ಓಟು ಯಾರಿಗೆ?, ಗೆದ್ದವರ ಸತ್ಯ, ಬದುಕಬಹುದು ಮೊದಲಾದವು ಸರಳ ರಗಳೆಯಲ್ಲಿ ಇವರು ಬರೆದಿರುವ ವ್ಯಂಗ್ಯ ನಾಟಕಗಳು. 

	ಇವರು ಚಲನಚಿತ್ರ ಕ್ಷೇತ್ರದಲ್ಲೂ ಕೆಲಸ ಮಾಡಿದ್ದಾರೆ. 1932ರಲ್ಲಿ ಡೊವಿಂಗೋ ಮತ್ತು ಭೂತರಾಜ್ಯ ಎಂಬ ಎರಡು ಮೂಕಚಿತ್ರಗಳನ್ನು ಬರೆದು ನಿರ್ದೇಶಿಸಿ ತಾವೇ ಛಾಯಾಚಿತ್ರಗಾರರೂ ನಿರ್ಮಾಪಕರೂ ಆದರು. ಅನಂತರ 1977ರಲ್ಲಿ ಪುನ: ಚಲನಚಿತ್ರ ರಂಗವನ್ನು ಪ್ರವೇಶಿಸಿ, ಮಲೆಯಮಕ್ಕಳು ಎಂಬ ಚಿತ್ರಕ್ಕೆ ಕಥೆ, ಸಂಭಾಷಣೆಗಳನ್ನು ಬರೆದು ನಿರ್ದೇಶಿಸಿದ್ದರು. 

	ಇವರಿಗೆ ಪ್ರಿಯವಾದ ಇನ್ನೊಂದು ಕ್ಷೇತ್ರ ಯಕ್ಷಗಾನ. ಚಿಕ್ಕಂದಿನಿಂದಲೂ ಇದರಲ್ಲಿ ಆಸಕ್ತಿ ತಾಳಿದ್ದ ಇವರು ಯಕ್ಷಗಾನ ಸಾಹಿತ್ಯ, ಸಂಗೀತ, ನಾಟ್ಯ, ವೇಷಭೂಷಣಗಳು, ನಟನೆಗಳ ಬಗ್ಗೆ ಆಳವಾಗಿ ಅಭ್ಯಸಿಸಿ ಯಕ್ಷಗಾನ ಬಯಲಾಟ ಎಂಬ ಪುಸ್ತಕ (1957) ಬರೆದರು. ಈ ಗ್ರಂಥ ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಿಗೆ ಭಾಷಾಂತರಗೊಂಡಿದೆ. ಕರ್ನಾಟಕದ ಅಮೂಲ್ಯ ನಾಟ್ಯಸಂಪತ್ತಾದ ಯಕ್ಷಗಾನವನ್ನು ಭಾರತದ ಅನ್ಯಭಾಷಾ ಪ್ರಾಂತಗಳು ಕಂಡು ಆಸಕ್ತಿ ಹೊಂದಬೇಕಾದರೆ ಈ ಕಲಾಮಾಧ್ಯಮದಲ್ಲಿನ, ಇತರ ಭಾಷಾ ಜನಗಳಿಗೆ ಅರ್ಥವಾಗದ ಮಾತುಗಾರಿಕೆಯನ್ನು ತೆಗೆದುಹಾಕಬೇಕು ಎಂದು ನಿರ್ಧರಿಸಿದ ಇವರು ಸಂಗೀತ, ನಾಟ್ಯಗಳಿಗೆ ಪ್ರಾಮುಖ್ಯ ನೀಡಿ ಸಂಭಾಷಣೆಯನ್ನು ತೆಗೆದು ಹಾಕಿದರು. ಪ್ರದರ್ಶನದ ಕಾಲವನ್ನು ಇಡೀ ರಾತ್ರಿಗೆ ಬದಲು ಮೂರು ಗಂಟೆಗೆ ಇಳಿಸಿದರು. ಅಂದವಾದ ನಾಟ್ಯಲೇಖನದ ಮೂಲಕ ನಾಲ್ಕಾರು ಕಥಾಪ್ರಸಂಗಗಳನ್ನು ಸುಂದರ ನಾಟ್ಯರೂಪಕಗಳನ್ನಾಗಿ ಮಾರ್ಪಡಿಸಿದರು. 1960ರಿಂದ ಇವರು ಯಕ್ಷಗಾನದಲ್ಲಿ ನಡೆಯಿಸಿದ ಬಹುವಿಧ ಪ್ರಯೋಗಗಳಿಗೆ 1971ರಲ್ಲಿ ಸರ್ಕಾರದ ಅಂಗೀಕಾರ ದೊರೆಯಿತು. ಉಡುಪಿಯಲ್ಲಿ ಆರಂಭಗೊಂಡ ಯಕ್ಷಗಾನ ಕೇಂದ್ರದ ನಿರ್ದೇಶಕರಾಗಿ ಇವರಿಂದ ಸಿದ್ಧಪಡಿಸಲಾದ ಯಕ್ಷಗಾನರೂಪಕಗಳು ಅಖಿಲಭಾರತ ಮನ್ನಣೆ ಪಡೆದಿವೆ. 1973ರಲ್ಲಿ ಇವರು ದೆಹಲಿಯಲ್ಲಿ ಯಕ್ಷಗಾನದ ಹಿಂದಿ ಆವೃತ್ತಿಯೊಂದನ್ನು ನಿರ್ದೇಶಿಸಿ ಪ್ರದರ್ಶಿಸಿದರು. ಯಕ್ಷಗಾನದ ಸ್ತ್ರೀ ವೇಷಭೂಷಣಗಳಲ್ಲಿ ಇವರು ಮಾಡಿದ ಮಾರ್ಪಾಟುಗಳು ಕ್ರಾಂತಿಕಾರಿಯಾದುವಲ್ಲದೆ, ಇಂದಿನ ಮೇಳಗಳೂ ಇದೇ ಮಾದರಿಯನ್ನನುಸರಿಸಿವೆ.

	ಇವರು ಏಕಾಂಗಿಯಾಗಿ ಬಾಲಪ್ರಪಂಚ (ಮೂರು ಸಂಪುಟಗಳಲ್ಲಿ) ಮತ್ತು ವಿಜ್ಞಾನ ಪ್ರಪಂಚ (ನಾಲ್ಕು ಸಂಪುಟಗಳಲ್ಲಿ) ಎಂಬ ವಿಶ್ವಕೋಶಗಳನ್ನು ರಚಿಸಿದ್ದಾರೆ (ನೋಡಿ- ಕನ್ನಡದಲ್ಲಿ-ವಿಶ್ವಕೋಶಗಳು). ಬಾಲಪ್ರಪಂಚ ಕಿರಿಯರಿಗಾಗಿ ಬರೆದ, ವಿವಿಧ ವಿಷಯಗಳ ಸಚಿತ್ರ ವಿಶ್ವಕೋಶ. ಮಾಧ್ಯಮಿಕ ಹಂತದವರೆಗಿನ ವಿದ್ಯಾಭ್ಯಾಸದ ಅವಕಾಶದಲ್ಲಿ ವಿದ್ಯಾರ್ಥಿಗಳಿಗೆ, ಉಪಾಧ್ಯಾಯರಿಗೆ, ವಿಷಯಸಂಗ್ರಹಕ್ಕಾಗಿ ಪರಿಶೀಲಿಸಬಹುದಾಗಿದ್ದ ಪುಸ್ತಕ.

	ಇವರು ವಿಶ್ವವಿದ್ಯಾಲಯಗಳಿಂದ ಪದವಿಗಳನ್ನು ಗಳಿಸಿ ವಿಜ್ಞಾನಿಗಳ ಪಂಕ್ತಿಯಲ್ಲಿ ಸೇರಿದವರಲ್ಲ. ಆದರೆ ನಾಡಿನ ಜನಸಾಮಾನ್ಯರಿಗೆ, ವಿದ್ಯಾರ್ಥಿಗಳಿಗೆ, ವಿಜ್ಞಾನ ವಿಷಯಗಳನ್ನು ತಿಳಿಸುವ ಬಯಕೆಯಿಂದ ಜನಪ್ರಿಯ ವಿಜ್ಞಾನ ಲೇಖನಗಳನ್ನೂ ಪುಸ್ತಕಗಳನ್ನೂ ಬರೆದ ಮೊದಲಿಗರಲ್ಲೊಬ್ಬರು. ಇವರ ವಿಜ್ಞಾನ ಸಂಬಂಧವಾದ ಕೃತಿಗಳು ವೈವಿಧ್ಯಮಯವಾಗಿವೆ. ಇವುಗಳಲ್ಲಿ ವಿಚಿತ್ರ ಖಗೋಳ(1965), ನಮ್ಮ ಭೂಖಂಡಗಳು(1967), ನವಸಾಕ್ಷರರಿಗಾಗಿ ಬರೆದ ಗೃಹವಿಜ್ಞಾನ(1929), ಕೋಳಿ ಸಾಕಣೆ(1949), ಅನುವಾದಿತ ಕೃತಿಗಳಾದ ಪರಮಾಣು : ಇಂದು ನಾಳೆ(1952), ನಮ್ಮ ಸುತ್ತಲಿನ ಕಡಲು(1956), ಭಾರತದ ಪರಿಸರ ಪರಿಸ್ಥಿತಿ(1984), ಹಿರಿಯ ಕಿರಿಯ ಹಕ್ಕಿಗಳು(1971), ಸ್ವಂತ ಅಧ್ಯಯನದಿಂದ ರಚಿಸಿದ ಉಷ್ಣವಲಯದ ಆಗ್ನೇಷ್ಯ(1982), ವಿಶಾಲ ಸಾಗರ(1984), ಪ್ರಾಣಿ ಪ್ರಪಂಚದ ವಿಸ್ಮಯಗಳು (1984), ಪ್ರಾಣಿ ಪ್ರಪಂಚ(1990) ಮುಖ್ಯವಾದುವು. 

	ಪತ್ರಿಕೋದ್ಯಮದಲ್ಲೂ ಇವರು ಸಾಕಷ್ಟು ದುಡಿದಿದ್ದಾರೆ. 1924ರಲ್ಲಿ ವಸಂತ ಎಂಬ ಮಾಸಪತ್ರಿಕೆಯನ್ನು ಆರಂಭಿಸಿ ಸುಮಾರು ನಾಲ್ಕು ವರ್ಷಗಳ ಕಾಲ ನಡೆಸಿದರು. ಅನಂತರ 1950ರಲ್ಲಿ ವಿಚಾರವಾಣಿ ಎಂಬ ವಾರಪತ್ರಿಕೆಯನ್ನು ಆರಂಭಿಸಿ ಸ್ವಲ್ಪಕಾಲ ನಡೆಸಿದರು. 

	ಶಿಕ್ಷಣ ಕ್ಷೇತ್ರದಲ್ಲಿ ಎಳೆಯ ಮಕ್ಕಳ ವಿದ್ಯಾಭ್ಯಾಸದ ಸಲುವಾಗಿ ಹಲವು ಪ್ರಯೋಗಗಳನ್ನು ಇವರು ನಡೆಸಿದ್ದಾರೆ. ಪ್ರಾಥಮಿಕ ತರಗತಿಗಳಿಗೆ ಕನ್ನಡ ಭಾಷಾಪಾಠದ ಪಠ್ಯಪುಸ್ತಕಗಳನ್ನು ಬರೆದಿದ್ದಾರೆ. ಭಾಷಾಶಿಕ್ಷಣಕ್ಕಾಗಿ ವಿಶಿಷ್ಟ ಯೋಜನೆಯೊಂದನ್ನು ಸಿದ್ಧಪಡಿಸಿ ಅದನ್ನು ಪ್ರಾಯೋಗಿಕವಾಗಿ ಪರಿಷ್ಕರಿಸಿ ಜಾಗತಿಕ ಮಕ್ಕಳ ಶಿಕ್ಷಣ ಯೋಜನೆಯವರಿಗೆ ನೀಡಿದ್ದಾರೆ. ಇವರು ವಯಸ್ಕರ ಶಿಕ್ಷಣ ಸಮಿತಿಯ ಸದಸ್ಯರೂ ಆಗಿದ್ದರು. ವಿದ್ಯಾರ್ಥಿಗಳ ಉಪಯೋಗಕ್ಕಾಗಿ ಸಿರಿಗನ್ನಡ ಅರ್ಥಕೋಶ (1941) ಎಂಬ ನಿಘಂಟುವನ್ನು ರಚಿಸಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಇಂಗ್ಲಿಷ್-ಕನ್ನಡ ನಿಘಂಟು ಹಾಗೂ ಕನ್ನಡ ವಿಶ್ವಕೋಶದ ಸಂಪಾದಕ ಮಂಡಲಿಯ ಸದಸ್ಯರಾಗಿ ಅನೇಕ ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. 

	ಇವರಿಗೆ ಕಲೆಯಲ್ಲಿ ವಿಶೇಷವಾದ ಆಸಕ್ತಿ. ದೇಶವಿದೇಶಗಳ ಚಿತ್ರ, ಶಿಲ್ಪ, ವಾಸ್ತುಗಳ ಬಗ್ಗೆ ಆಳವಾದ ಅಭ್ಯಾಸ ಮಾಡಿದ್ದಾರೆ. ಉತ್ತಮ ಛಾಯಾಚಿತ್ರಗ್ರಾಹಕರಾಗಿ ಇವರು ದೇಶದ ಉದ್ದಗಲವನ್ನೆಲ್ಲ ಸಂಚರಿಸಿ ಹಲವಾರು ಚಿತ್ರಗಳನ್ನು ತೆಗೆದು ಈ ವಿಷಯಗಳ ಮೇಲೆ ಸಾಕಷ್ಟು ಲೇಖನಗಳನ್ನು ಬರೆದಿದ್ದಾರೆ. ಚಿತ್ರಮಯ ದಕ್ಷಿಣ ಕನ್ನಡ, ಕರ್ನಾಟಕದಲ್ಲಿ ಚಿತ್ರಕಲೆ, ಭಾರತೀಯ ಶಿಲ್ಪ ಎಂಬವು ಈ ವಿಷಯಗಳ ಮೇಲೆ ಇವರು ಬರೆದ ಪುಸ್ತಕಗಳು. ಜಾಗತಿಕ ಶಿಲ್ಪ, ಚಿತ್ರ, ವಾಸ್ತುಗಳ ವಿವರಣೆ ಮತ್ತು ವಿಮರ್ಶೆಗಳೊಂದಿಗೆ ಸಚಿತ್ರವಾಗಿ ಪ್ರಕಟವಾಗಿರುವ ಕಲಾಪ್ರಪಂಚ ಇವರ ಇನ್ನೊಂದು ಬೃಹದ್ಗ್ರಂಥ. 

	ರಾಜಕೀಯವೂ ಇವರು ಮುಟ್ಟದ ಕ್ಷೇತ್ರವಲ್ಲ. ಶುದ್ಧವಾದ, ಶುಚಿಯಾದ ಆಡಳಿತ ಬಯಸಿದ ಇವರು ರಾಜಕೀಯರಂಗದ ಕೆಲವೊಂದು ಸ್ವಲಾಭ, ಸ್ವಾರ್ಥ ಪ್ರವೃತ್ತಿಯನ್ನು ಕೆಚ್ಚೆದೆಯಿಂದ ನಿಷ್ಠುರವಾಗಿ ಬರೆದಿದ್ದಾರೆ. ತಮಗೆ ತಪ್ಪಾಗಿ ಕಂಡುದನ್ನು ಸ್ಪಷ್ಟ ಶಬ್ದಗಳಲ್ಲಿ ಟೀಕಿಸಲು ಇವರೆಂದೂ ಅಳುಕಿದವರಲ್ಲ. ಚುನಾವಣೆಗಳಲ್ಲೂ ಸ್ಪರ್ಧಿಸಿದ್ದರು. ಸರ್ಕಾರ ನೀಡಿದ ಪದ್ಮಭೂಷಣ ಪ್ರಶಸ್ತಿಯನ್ನು ದೇಶದಲ್ಲಿ ತುರ್ತು ಪರಿಸ್ಥಿತಿಯ ಘೋಷಣೆಯಾದಾಗ, ಸರ್ಕಾರದ ಮನೋವೃತ್ತಿಯನ್ನು ಪ್ರತಿಭಟಿಸುವ ಸಲುವಾಗಿ ಹಿಂದಿರುಗಿಸಿದರು. ಮೂಲಭೂತ ಹಕ್ಕುಗಳ ಪ್ರತಿಪಾದಕರಾಗಿ 1977ರ ಚುನಾವಣೆಯಲ್ಲಿ ಸಕ್ರಿಯವಾಗಿ ಭಾಗವಹಿಸಿ ಆಳುವ ಸರ್ಕಾರದ ನೀತಿಗಳನ್ನು ವಿರೋಧಿಸಿದರು. 

	ಪ್ರವಾಸಪ್ರಿಯರಾದ ಇವರು ಭಾರತವನ್ನು ಹಲವಾರು ಸಲ ಸುತ್ತಿದ್ದಾರೆ. 1952ರಲ್ಲಿ ಯುರೋಪನ್ನೂ 1976ರಲ್ಲಿ ಅಮೆರಿಕವನ್ನೂ ಸಂದರ್ಶಿಸಿದ್ದರು. ಅಬೂವಿನಿಂದ ಬರಾಮಕ್ಕೆ, ಅಪೂರ್ವಪಶ್ಚಿಮ ಮತ್ತು ಪಾತಾಳಕ್ಕೆ ಪ್ರಯಾಣ - ಇವು ಇವರು ಬರೆದಿರುವ ಪ್ರವಾಸ ಕಥನಗಳು. ಆತ್ಮಕಥೆಯನ್ನು ಹುಚ್ಚು ಮನಸ್ಸಿನ ಹತ್ತು ಮುಖಗಳು ಎಂಬ ಹೆಸರಿನಿಂದ ಪ್ರಕಟಿಸಿದ್ದಾರೆ. ಚಿಂತನಗಳನ್ನು ವಿವಿಧ ಭಾಗಗಳಾಗಿ ವಿಂಗಡಿಸಿ ಸ್ಮøತಿ ಪಟಲದಿಂದ ಎಂಬ ಶೀರ್ಷಿಕೆಯಲ್ಲಿ ಮೂರು ಭಾಗಗಳಾಗಿ ಬರೆದಿದ್ದಾರೆ. 

	ಇವರಿಗೆ ಹಲವು ಬಗೆಯ ಗೌರವ ಪ್ರಶಸ್ತಿಗಳು ಲಭಿಸಿವೆ. ಇವರ ಯಕ್ಷಗಾನ ಬಯಲಾಟ ಗ್ರಂಥಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಬಹುಮಾನ ಬಂತು(1958). ಈ ಕೃತಿಗೆ ಸ್ವೀಡಿಷ್ ಅಕಾಡೆಮಿಯ ಪಾರಿತೋಷಿಕವೂ ಲಭಿಸಿದೆ. ಇವರಿಗೆ ಕಾರಂತ ಪ್ರಪಂಚ ಎಂಬ ಅಭಿನಂದನ ಗ್ರಂಥವನ್ನು ಅರ್ಪಿಸಲಾಯಿತು(1969). ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಸಂಸ್ಥೆ ಇವರನ್ನು ಕುರಿತು ಇಂಗ್ಲಿಷ್‍ನಲ್ಲಿ ಜೀವನಚರಿತ್ರೆ ಯೊಂದನ್ನು ಪ್ರಕಟಿಸಿದೆ(1973). ಇವರ ಮೂಕಜ್ಜಿಯ ಕನಸುಗಳು ಕಾದಂಬರಿಗೆ ಜ್ಞಾನಪೀಠ ಪ್ರಶಸ್ತಿ ಲಭಿಸಿತು(1978). ಮಧ್ಯಪ್ರದೇಶ ಸರ್ಕಾರದ ತುಲಸೀ ಸಂಮಾನ್(1990), ಇಂದಿರಾಗಾಂಧಿ ಪರ್ಯಾವರಣ ಪುರಸ್ಕಾರ (1992), ಜಪಾನೀಸ್ ಡಾನ್ಸ್ ಕ್ರಿಟಿಕ್ಸ್ ಸೊಸೈಟಿ ಅವಾರ್ಡ್(1981), ಮೈಸೂರು, ಕರ್ನಾಟಕ, ಮೀರತ್, ಮಂಗಳೂರು, ಜಬ್ಬಲ್‍ಪುರ, ವಲ್ರ್ಡ್ ಅಕಾಡೆಮಿ ಆಫ್ ಆರ್ಟ್ ಅಂಡ್ ಕಲ್ಚರ್ ವಿಶ್ವವಿದ್ಯಾಲಯಗಳ ಗೌರವ ಡಾಕ್ಟೊರೇಟ್, ಕೇಂಧ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ (1975), ಕರ್ನಾಟಕ ಲಲಿತಕಲಾ ಅಕಾಡೆಮಿ ಪ್ರಶಸ್ತಿ (1984), ಪಂಪ ಪ್ರಶಸ್ತಿ(1992), ನಾಡೋಜ ಪ್ರಶಸ್ತಿ(1997), ವಿಶ್ವಭಾರತಿ ವಿಶ್ವವಿದ್ಯಾಲಯದ ದೇಶಿಕೋತ್ತಮ(1997) ಲಭಿಸಿವೆ. ಮಂಗಳೂರು ವಿಶ್ವವಿದ್ಯಾಲಯದಲ್ಲಿ ಕಾರಂತ ಅಧ್ಯಯನ ಪೀಠವಿದ್ದು, ಇವರ ಅಪ್ರಕಟಿತ ಹಸ್ತಪ್ರತಿ, ವಸ್ತು ವಿಷಯ, ಪುಸ್ತಕಗಳ ಸಂಗ್ರಹ, ಪ್ರದರ್ಶನ, ಪ್ರಕಟಣೆಗಳನ್ನು ಕೈಗೊಂಡಿದೆ. ಸು. 930 ಬಿಡಿಬರಹಗಳು ಶಿವರಾಮ ಕಾರಂತರ ಲೇಖನಗಳು ಮಾಲೆಯಲ್ಲಿ 8 ಸಂಪುಟಗಳಲ್ಲಿ ಪ್ರಕಟವಾಗಿದೆ. ಪತ್ರವ್ಯವಹಾರ ಮತ್ತು ನಾನು(1998) ಇವರ ಕೊನೆಯ ಸಂಕಲನ. ಇವರು 1997 ಡಿಸೆಂಬರ್ 9 ರಂದು ನಿಧನರಾದರು.	
					

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ
							(ಎಸ್.ಯು.ಪಿ.)